ಟ್ರೈಪೆಟಿಡೀ
	ಡಿಪ್ಟರ ಗಣಕ್ಕೆ ಸೇರಿದ ಒಂದು ಕುಟುಂಬ. ಇದಕ್ಕೆ ಟೆಫ್ರಿಟಿಡೀ, ಟ್ರುಪಾನೈಯಿಡೀ, ಟ್ರೈಪಾನೈಯಿಡೀ ಮತ್ತು ಯೂರಿಬೈಯಿಡೀ ಎಂಬ ಹೆಸರುಗಳೂ ಉಂಟು. ಇದಕ್ಕೆ ಸೇರಿದ ಕೀಟಗಳು ಹಲವಾರು ಗಿಡಗಳ ಹಣ್ಣು, ಹೂವು, ಎಲೆ, ಕಾಂಡ ಮುಂತಾದವುಗಳಲ್ಲಿ ಮೊಟ್ಟೆಗಳನ್ನಿಡುವುವು. ಡಿಂಬಗಳು ಈ ಭಾಗಗಳನ್ನು ತಿಂದು ಅವು ಕೊಳೆತು ಬೀಳಲು ಕಾರಣವಾಗುತ್ತವೆ. ಆದ್ದರಿಂದ ಈ ಕೀಟಗಳನ್ನು ಹಣ್ಣಿನ ನೊಣಗಳು (ಫ್ರೂಟ್ ಫ್ಲೈಸ್) ಎಂದು ಕರೆಯುವುದುಂಟು. ಈ ನೊಣಗಳು ಸಣ್ಣ ಅಥವಾ ಮಧ್ಯಮ ಗಾತ್ರದ ಕೀಟಗಳು : 1.5-6.0 mm. ಉದ್ದ ಇವೆ. ಇವುಗಳ ಬಣ್ಣ ಹಳದಿ, ಕಂದು, ಕಿತ್ತಳೆ, ಕಪ್ಪು ಇಲ್ಲವೆ ಈ ಬಣ್ಣಗಳ ಮಿಶ್ರಣ. ರೆಕ್ಕೆಗಳ ಮೇಲೆ ಚುಕ್ಕೆಗಳು ಅಥವಾ ಪಟ್ಟೆಗಳಿವೆ. ಕೆಲವು ಪ್ರಭೇದಗಳು ಗಿಡಗಂಟೆಗಳ ಮೇಲೆ ಕುಳಿತಾಗ ತಮ್ಮ ರೆಕ್ಕೆಗಳನ್ನು ನಿಧಾನವಾಗಿ ಮೇಲಕ್ಕೆ ಕೆಳಕ್ಕೆ ಆಡಿಸುವುವು. ಇದರಿಂದಾಗಿ ಇವಕ್ಕೆ ನವಿಲು ನೊಣಗಳು ಎಂಬ ಹೆಸರೂ ಇದೆ. ಇವುಗಳ ರೆಕ್ಕೆಯಲ್ಲಿರುವ ಸಬ್‍ಕಾಸ್ಟನರದ ಆಕಾರದಿಂದ ಇವನ್ನು ಸುಲಭವಾಗಿ ಗುರ್ತಿಸಬಹುದು. ಈ ನರ ರೆಕ್ಕೆಯ ಮೇಲೆ ಕೊಂಚ ದೂರ ಸಾಗಿ ಅನಂತರ ಸಮಕೋನದಲ್ಲಿ ಬಾಗಿ ಕ್ರಮೇಣ ಕಣ್ಮರೆಯಾಗುತ್ತದೆ. ಹೆಣ್ಣುಗಳಲ್ಲಿ ಪ್ರಮುಖವಾದ ಅಂಡನಿಕ್ಷೇಪಕ (ಓವಿಪಾಸಿಟರ್) ಉಂಟು.

	ಟ್ರೈಪೆಟಿಡೀ ನೊಣಗಳ ಡಿಂಬಗಳು ಸಸ್ಯಾಹಾರಿಗಳು. ಪೂರ್ಣವಾಗಿ ಬೆಳೆದ ಮರಿಗಳ ಆಕಾರ ಗುಂಡಗೆ ಇಲ್ಲವೆ ಪೀಪಾಯಿಯಂತೆ. ಹೊಟ್ಟೆಯ ಕೊನೆಯಲ್ಲಿ ಒಂದು ಜೊತೆ ಕೊಳವೆಗಳಿವೆ (ಏನಲ್ ಟ್ಯೂಬ್ಯೂಲ್ಸ್). ಮರಿಗಳ ಜೀವನ ಕ್ರಮದ ಆಧಾರದ ಮೇಲೆ ಇವನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಮೊದಲನೆಯ ಗುಂಪಿಗೆ ಸೇರಿದ ಹುಳುಗಳು ರಸಭರಿತ ಹಣ್ಣುಗಳ ಮೇಲೆ ಜೀವಿಸುತ್ತವೆ ; ಉದಾಹರಣೆ: ಡ್ಯಾಕಸ್ ಮತ್ತು ಸೆರಟೈಟಿಸ್ ಮುಂತಾದವು. ಆಸ್ಟರೇಸೀ ಕುಟುಂಬದ ಹೂವುಗಳ ಮೇಲೆ (ಸೂರ್ಯಕಾಂತಿ ಕುಟುಂಬ) ಜೀವಿಸುವ ಹುಳುಗಳು ಎರಡನೆಯ ಗುಂಪಿಗೆ ಸೇರಿದವು. ಉದಾಹರಣೆ : ಟೆಫ್ರೈಟಸ್ ಮತ್ತು ಯೂರೋಫೋರ ಜಾತಿಗೆ ಸೇರಿದ ನೊಣಗಳ ಮರಿಗಳು ಎಲೆ ಅಥವಾ ಕಾಂಡದಲ್ಲಿ ಸುರಂಗ ಕೊರೆದುಕೊಂಡು ಜೀವಿಸುತ್ತವೆ. ಉದಾಹರಣೆ : ಫೈಲೊಫಿಲ, ಯುರೀಬಿಯ ಮುಂತಾದುವು. ನಾಲ್ಕನೆಯ ಗುಂಪಿಗೆ ಸೇರಿದ ನೊಣಗಳ ಮರಿಗಳು ಸಸ್ಯಗಳ ನಾನಾಭಾಗಗಳಲ್ಲಿ ಗಂಟುಗಳನ್ನು (ಗಾಲ್ಸ್) ಉಂಟುಮಾಡುವುವು. ಈ ಗುಂಪಿಗೆ ಸೇರಿದ ನೊಣಗಳಲ್ಲಿ ಸೆರಟೈಟಿಸ್ ಕ್ಯಾಪಿಟೇಟ ಎಂಬುದು ಅತಿ ಮುಖ್ಯವಾದುದು. ಇದನ್ನು ಮೆಡಿಟರೇನಿಯನ್ ಹಣ್ಣುನೊಣ ಎಂದು ಸಹ ಕರೆಯುತ್ತಾರೆ. 

	ಭಾರತದಲ್ಲಿ ಸಾಮಾನ್ಯವಾಗಿ, ಮಾವಿನಹಣ್ಣು, ಸೀಬೆಹಣ್ಣು ಮತ್ತಿತರ ಹಣ್ಣುಗಳ ಮೇಲೆ ಇವುಗಳ ಹಾವಳಿ ಹೆಚ್ಚು. ಮೊಟ್ಟೆಗಳಿಂದ ಹೊರಬರುವ ಮರಿಗಳು ಹಣ್ಣುಗಳನ್ನು ತಿಂದು ಕೊಳೆಸಿ ಬಹಳ ನಷ್ಟವಾದ ಉಂಟುಮಾಡುತ್ತವೆ. ಅಲ್ಲದೆ ಕೆಲವು ಜಾತಿಯ ನೊಣಗಳು ಕುಂಬಳಕಾಯಿ, ಸೋರೆಕಾಯಿ ಮುಂತಾದವುಗಳಲ್ಲಿ ಮೊಟ್ಟೆಯಿಟ್ಟು ಅವನ್ನು ಹಾಳು ಮಾಡುವುದುಂಟು. ಡ್ಯಾಕಸ್ ಮತ್ತು ಕೀಟೋಡ್ಯಾಕಸ್ ಮುಂತಾದವು ಒಳ್ಳೆಯ ಉದಾಹರಣೆಗಳು
(ಟಿ.ಎಸ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ